- ಉತ್ಸವಕ್ಕೆ ಹರಿದು ಬಂದ ಜನಸಾಗರ, ಉತ್ಸವಕ್ಕೆ ಸಾಕ್ಷಿಯಾದ 6000 ಜನ
- ಹನ್ನೆರಡು ಥೀಮ್‌ಗಳು 50ಕ್ಕೂ ಹೆಚ್ಚು ಸ್ಟಾಲ್‌ಗಳು,
ಪಾಂಡವಪುರ, ಸೆ. 13: ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಹಳ್ಳಿಯ ಜೀವನವನ್ನು ಸುಧಾರಿಸುವುದು, ಉಪ ಉತ್ಪನ್ನಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸುವುದೇ ಸ್ವರಾಜ್ ಉತ್ಸವದ ಗುರಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವ ಕ್ರೀಡಾಂಗಣದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ‘ಸ್ವರಾಜ್ ಉತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನಾನು ಚುನಾವಣೆಯಲ್ಲಿ ಗೆದ್ದು ಕಾರ್ಯಾರಂಭ ಮಾಡಿದಾಗ ಸಮಾಜದ ಸಮಸ್ಯೆಗಳ ಆಳವನ್ನು ಅರಿತುಕೊಂಡೆ. ಗ್ರಾಮ ಅಭಿವೃದ್ಧಿಗೆ ನಡೆಸುವ ಕಾಮಗಾರಿಗಳಷ್ಟೇ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಸ್ವರಾಅಜ್ ಕಲ್ಪನೆಯ ರೂಪ ತಾಳಿದೆ” ಎಂದರು.
“ಈ ಉತ್ಸವದಲ್ಲಿ 12 ಪ್ರಮುಖ ಅಂಶಗಳನ್ನು ಆಯ್ಕೆ ಮಾಡಿಕೊಂಡು, ಪ್ರತಿ ಅಂಶಕ್ಕೆ 3-4 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ, ಆರೋಗ್ಯ, ಯುವ ಜನ ಸಬಲೀಕರಣ, ಲಿಂಗ ಸಮಾನತೆ, ಕೃಷಿ ಸ್ವಾವಲಂಬನೆ, ತಂತ್ರಜ್ಞಾನ, ಉದ್ಯಮಶೀಲತೆ ಮುಂತಾದ ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಂಸ್ಥೆಗಳೊಂದಿಗೆ ಸಹಯೋಗ ನೀಡುತ್ತಿವೆ ಎಂದು ಅವರು ವಿವರಿಸಿದರು.
“ನಮ್ಮ ದೇಶದ ಅಭಿವೃದ್ಧಿಗೆ ಹಳ್ಳಿಗಳು ಮತ್ತು ಸಣ್ಣ ಕೈಗಾರಿಕೆಗಳು ಪ್ರಮುಖವೆಂದು ಗಾಂಧೀಜಿ ಒತ್ತಿ ಹೇಳಿದ್ದಾರೆ. ದೇಶದ 50-60 ಶೇಕಡಾ ಜನಸಂಖ್ಯೆ ಸಣ್ಣ ಕೈಗಾರಿಕೆಗಳಲ್ಲಿ ತೊಡಗಿದ್ದರೆ, ಕೇವಲ 15 ಶೇಕಡಾ ಜನರು ಐಟಿ-ಬಿಟಿ ಕ್ಷೇತ್ರದಲ್ಲಿದ್ದಾರೆ. ಈ ಕ್ಷೇತ್ರದ ಜನರು ಅವಲಂಬಿತರಾಗದೆ, ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು,” ಎಂದು ಶಾಸಕರು ಒತ್ತಾಯಿಸಿದರು. ಈ ಉತ್ಸವ ಯಶಸ್ವಿಯಾದರೆ, ರಾಜ್ಯ ರೈತ ಸಂಘದ ಮೂಲಕ ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆದ ಈ ಉತ್ಸವದಲ್ಲಿ 7,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಪ್ರದರ್ಶನಗಳು, ಚರ್ಚೆಗಳು, ಪ್ರಾತ್ಯಕ್ಷಿಕೆಗಳು ಮ ತ್ತು ನೇರ ಸಂವಾದಗಳ ಮೂಲಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸ್ವಯಂಪ್ರೇರಿತವಾಗಿ ಮಳಿಗೆಗಳಲ್ಲಿ ಕಂಡುಕೊಂಡರು.
ಈ ಉತ್ಸವವು ಮೇಲುಕೋಟೆ ಕ್ಷೇತ್ರದ ಐತಿಹಾಸಿಕ-ಸಾಂಸ್ಕೃತಿಕ ಸೌಂದರ್ಯವನ್ನು ಉಳಿಸುವ, ಪರ್ಯಟನವನ್ನು ಉತ್ತೇಜಿಸುವ, ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವ ಮತ್ತು ಕೃಷಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಉಪಕ್ರಮಗಳಿಗೆ ವೇದಿಕೆಯಾಯಿತು. ಸ್ವರಾಜ್ ಉತ್ಸವವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.








